ಹೃದಯಾಘಾತ ತಡೆಗಟ್ಟುವಲ್ಲಿ ಇಸಿಜಿ ಸಂಜೀವಿನಿ: ಶಾಸಕ ಪ್ರಸಾದ ಅಬ್ಬಯ್ಯ!
ಹುಬ್ಬಳ್ಳಿ, ಜೂನ್ 8: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ನಮ್ಮ ಕ್ಲಿನಿಕ್‌ಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 12 ಇಸಿಜಿ ಯಂತ್ರಗಳನ್ನು ವಿತರಿಸಲಾಗಿದ್ದು, ಹೃದಯಾಘಾತ ತಡೆಗಟ್ಟುವಲ್ಲಿ ಹಾಗೂ ಬಡವರ ಆರೋಗ್ಯ ರಕ್ಷಣೆಯಲ್ಲಿ ಅವು ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ 2024-25ನೇ ಸಾಲಿನ ಯೋಜನೆಯಡಿ 12 ಆಸ್ಪತ್ರೆಗಳಿಗೆ ಇಸಿಜಿ ಯಂತ್ರ ವಿತರಣೆ ಹಾಗೂ ಹೃದಯ ರೋಗ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವ ಕ್ಷೇತ್ರದ 6 ನಮ್ಮ ಕ್ಲಿನಿಕ್‌ಗಳು, 4 ನಗರ ಆರೋಗ್ಯ ಕೇಂದ್ರಗಳು ಹಾಗೂ 2 ಪಾಲಿಕೆ ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳನ್ನು ವಿತರಿಸಲಾಗಿದೆ. ಕ್ಷೇತ್ರದಲ್ಲಿ ಇನ್ನೂ 5 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬಡವರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಆಸ್ಪತ್ರೆಯನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪುನೀತ್ ಹೃದಯ ಜ್ಯೋತಿ’ ಯೋಜನೆಯಿಂದ ಸಾವಿರಾರು ಜನರ ಜೀವ ಉಳಿದಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ರಾಷ್ಟ್ರೀಕರಣದ ಕುರಿತು ಸರ್ಕಾರ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ ಎಂದು ಹೇಳಿದರು.
ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಎದೆ ಉರಿ, ಎದೆ ನೋವು, ಭಾರವಾಗುವುದು, ಬೆನ್ನು ನೋವು, ವಾಕರಿಕೆ ಸೇರಿದಂತೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಇಸಿಜಿ ಯಂತ್ರಗಳನ್ನು ಒದಗಿಸಿರುವುದು ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ನೀಡುತ್ತಿರುವ ಕೊಡುಗೆ ಮಾದರಿಯಾಗಿದೆ ಎಂದು ಹೇಳಿದರು.
ಡಿಎಚ್‌ಒ ಡಾ. ಪರಶುರಾಮ ಮಾತನಾಡಿ, ನಮ್ಮ ಕ್ಲಿನಿಕ್‌ಗಳಿಗೆ ಮೊದಲ ಬಾರಿಗೆ ಇಸಿಜಿ ಯಂತ್ರಗಳನ್ನು ವಿತರಿಸಿರುವುದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಇದು ಶಾಸಕ ಅಬ್ಬಯ್ಯ ಅವರ ಜನಪರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೊಡೆಗಳನ್ನು ವಿತರಿಸಲಾಯಿತು. ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಟಿಎಚ್‌ಒ ಡಾ. ಹುಲಗಣ್ಣ ಇಂಜಗನರಿ, ಡಾ. ಭಾರತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಓಂಕಾರಗೌಡ್ರ, ತಾಲೂಕು ಕಚೇರಿ ಸಿಬ್ಬಂದಿ, ನಮ್ಮ ಕ್ಲಿನಿಕ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
yallu