ಗೋಕುಲ್ ರಸ್ತೆಯಲ್ಲಿ ಅನಧಿಕೃತ ಕಟ್ಟಡಕ್ಕೆ ಮಹಾನಗರ ಪಾಲಿಕೆ ಬಿಗ್ ಶಾಕ್! ಅನಧಿಕೃತ ಕಟ್ಟಡ ತೆರವಿಗೆ ಅಂತಿಮ ಆದೇಶ: ಕಾರ್ಯಾಚರಣೆಗೆ ಪಾಲಿಕೆ ಸಿದ್ಧತೆ!

ಗೋಕುಲ್ ರಸ್ತೆಯಲ್ಲಿ ಅನಧಿಕೃತ ಕಟ್ಟಡಕ್ಕೆ ಮಹಾನಗರ ಪಾಲಿಕೆ ಬಿಗ್ ಶಾಕ್! ಅನಧಿಕೃತ ಕಟ್ಟಡ ತೆರವಿಗೆ ಅಂತಿಮ ಆದೇಶ: ಕಾರ್ಯಾಚರಣೆಗೆ ಪಾಲಿಕೆ ಸಿದ್ಧತೆ!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಗೋಕುಲ ರಸ್ತೆಯಲ್ಲಿರುವ ಸವರ್ಣಾ ಗ್ರಾನೈಟ್ಸ್‌ನ ಅನಧಿಕೃತ ಕಟ್ಟಡ ಹಾಗೂ ಶೆಡ್ ತೆರವುಗೊಳಿಸಲು ಪಾಲಿಕೆ ಆಯುಕ್ತರು ಅಂತಿಮ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದ ಗೋಕುಲ ರಸ್ತೆಯ ಸರ್ವೆ ನಂಬರ್ 98ರ ಹಿಸ್ಸಾ 1/2ರಲ್ಲಿ ಅನುಮತಿ ಇಲ್ಲದೆ ಕಟ್ಟಡ ಹಾಗೂ ಶೆಡ್ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ-1976ರ ಕಲಂ 321ರ ಅಡಿಯಲ್ಲಿ ಕಟ್ಟಡದ ಮಾಲೀಕರಿಗೆ ಪಾಲಿಕೆಯಿಂದ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸೂಕ್ತ ಉತ್ತರ ಲಭಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಪಾಲಿಕೆ ಆಯುಕ್ತರು ಅಂತಿಮ ತೆರವು ಆದೇಶ ನೀಡಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ಆಯುಕ್ತರು, ಗೋಕುಲ ರಸ್ತೆ ಪೊಲೀಸ್ ಠಾಣೆ ಹಾಗೂ ಸಬ್‌ ಅರ್ಬನ್ ಪೊಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ.

ಇದಲ್ಲದೆ, ತೆರವು ಕಾರ್ಯಾಚರಣೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಅಧಿಕಾರಿಗಳಿಗೆ ಹಾಗೂ ಕಾರ್ಯಾಚರಣೆಗೆ ಜೆಸಿಬಿ ಮತ್ತು 20 ಪೌರಕಾರ್ಮಿಕರನ್ನು ನಿಯೋಜಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪಾಲಿಕೆಯ ಈ ಕ್ರಮದಿಂದ ಸುವರ್ಣಾ ಗ್ರಾನೈಟ್ಸ್‌ನ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ.ಇನ್ನೂ ನ್ಯೂಸ್ ಒನ್ ನಲ್ಲಿ ನಿರಂತರವಾಗಿ ಈ ಸುದ್ದಿಯನ್ನು ಬಿತ್ತರ ಮಾಡಲಾಗಿತ್ತು.ಈಗ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು ಅಂತಿಮವಾಗಿ ನೋಟಿಸ್ ನೀಡಿ ತೆರವು ಮಾಡುವಂತೆ ಆದೇಶ ನೀಡಿದ್ದಾರೆ.