ಮಕ್ಕಳ ಶಿಕ್ಷಣಕ್ಕೆ ಕೈಜೋಡಿಸಿದ ಚಿಟಗುಪ್ಪಿ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ

ಮಕ್ಕಳ ಶಿಕ್ಷಣಕ್ಕೆ ಕೈಜೋಡಿಸಿದ ಚಿಟಗುಪ್ಪಿ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ

ಹುಬ್ಬಳ್ಳಿ: ಜನ್ಮದಿನವನ್ನು ಕೇಕ್ ಕತ್ತರಿಸಿ ಸಂಭ್ರಮಿಸುವ ಬದಲು, ಮಕ್ಕಳ ಮುಖದಲ್ಲಿ ನಗು ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡ ವೈದ್ಯರೊಬ್ಬರ ಕಾರ್ಯ ಗಮನ ಸೆಳೆದಿದೆ.

ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಶ್ರೀಧರ್ ದಂಡಪ್ಪನವರ ಅವರು ತಮ್ಮ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಗೋಪನಕೊಪ್ಪದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ಚೆನ್ನಾಗಿ ಓದಿ, ನಿಮ್ಮದೇ ಆದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ನಿಮ್ಮ ತಂದೆ-ತಾಯಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿ” ಎಂದು ಕಿವಿಮಾತು ಹೇಳಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ನಡೆದ ಈ ಸರಳ ಕಾರ್ಯಕ್ರಮ, ಜನ್ಮದಿನದ ಆಚರಣೆಗೆ ಹೊಸ ಅರ್ಥ ನೀಡಿತು. ವೈಯಕ್ತಿಕ ಸಂಭ್ರಮಕ್ಕಿಂತ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವೇ ಮುಖ್ಯ ಎಂಬ ಸಂದೇಶವನ್ನು ವೈದ್ಯರು ತಮ್ಮ ಕಾರ್ಯದ ಮೂಲಕ ಸಾರಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.