ಹುಡಾ ಅಧ್ಯಕ್ಷ ಸ್ಥಾನ ಈ ಬಾರಿ ಮಹಿಳೆಗೆ ಪಿಕ್ಸ್?
ಧಾರವಾಡ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷರ ನಾಮನಿರ್ದೇಶನದ ಅಧಿಕಾರಾವಧಿ ಫೆಬ್ರವರಿ 28ಕ್ಕೆ ಅಂತ್ಯಗೊಳ್ಳಲಿರುವ ಹಿನ್ನೆಲೆ, ಈ ಹುದ್ದೆ ಸುತ್ತ ಕಾಂಗ್ರೆಸ್ ವಲಯದಲ್ಲಿ ಭಾರೀ ಚಟುವಟಿಕೆಗಳು ಜೋರಾಗಿವೆ. ಅಧ್ಯಕ್ಷ ಪಟ್ಟಕ್ಕಾಗಿ ಹಲವು ಮುಖಂಡರು ಈಗಾಗಲೇ ತಮ್ಮ ನಾಯಕರ ಬಳಿಗೆ ಲಾಬಿ ಆರಂಭಿಸಿದ್ದು, ಈ ಬಾರಿ ಮಹಿಳೆಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಗಟ್ಟಿಯಾಗುತ್ತಿದೆ.
2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಹುದ್ದೆಗೆ ಶಾಕೀರ ಸನದಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಅಧಿಕಾರಾವಧಿ ಮುಗಿಯುತ್ತಿರುವ ಹೊತ್ತಿನಲ್ಲಿ ಹೊಸ ನೇಮಕಾತಿ ಕುರಿತ ಕಸರತ್ತು ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬೆಂಬಲಿಗರು ತಮ್ಮ ತಮ್ಮ ಶಿಬಿರದ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಡ ಹೇರುತ್ತಿರುವುದು ಗಮನಾರ್ಹ.
ಜಿಲ್ಲಾ ಮಟ್ಟದ ಸಚಿವರು, ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಾರಿ ‘ಮಹಿಳೆಗೆ ಪಟ್ಟ’ ಎನ್ನುವ ಸಂದೇಶವೇ ಮೇಲುಗೈ ಸಾಧಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಸ್ವತಃ ಮಹಿಳೆಗೆ ಅವಕಾಶ ನೀಡುವ ಆಲೋಚನೆ ವ್ಯಕ್ತಪಡಿಸಿದ್ದಾರೆಯೆಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.
ಇದಲ್ಲದೆ, ಹುಡಾ ಅಧ್ಯಕ್ಷ ಸ್ಥಾನ ಹುಬ್ಬಳ್ಳಿಗೋ ಅಥವಾ ಧಾರವಾಡಕ್ಕೋ ಎನ್ನುವ ಚರ್ಚೆಗೂ ತೆರೆ ಬಿದ್ದಂತಾಗಿದ್ದು, “ಹುಬ್ಬಳ್ಳಿಯಲ್ಲ, ಧಾರವಾಡದಲ್ಲ... ನವನಗರದವರಿಗೆ ಅವಕಾಶ” ಎಂಬ ಮಾತು ಕಾಂಗ್ರೆಸ್ ಒಳವಲಯದಲ್ಲಿ ಕೇಳಿಬರುತ್ತಿದೆ. ಈ ಹಿನ್ನೆಲೆ ನವನಗರದ ಕಾಂಗ್ರೆಸ್ ಮುಖಂಡೆ ದೇವಕಿ ಯೋಗಾನಂದ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಅವರಿಗೆ ಪಟ್ಟ ಖಚಿತವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.
ಪಕ್ಷ ಸಂಘಟನೆದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ದೇವಕಿ ಯೋಗಾನಂದ, ವಿವಿಧ ಹುದ್ದೆಗಳ ಮೂಲಕ ಕಾರ್ಯಕರ್ತರ ಜತೆ ನಂಟು ಬೆಳೆಸಿಕೊಂಡಿದ್ದಾರೆ. ಮಹಿಳಾ ಪ್ರತಿನಿಧಿತ್ವದ ಒತ್ತಾಯವೂ ಹೆಚ್ಚುತ್ತಿರುವ ಕಾರಣ, ಈ ಬಾರಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಸೂಚಿಸುತ್ತಿವೆ.
ಒಟ್ಟಾರೆ, ಹುಡಾ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಒಳರಾಜಕೀಯ ಚಟುವಟಿಕೆಗಳು ಕಾಂಗ್ರೆಸ್ ಒಳವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಂತಿಮವಾಗಿ ವರಿಷ್ಠರು ಯಾರಿಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎಂಬುದೇ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.
yallu