ಹು-ಧಾ ಪಾಲಿಕೆ ಉಪ ಆಯುಕ್ತ ವಿಜಯಕುಮಾರ್ ಆರ್. ಅವರಿಗೆ VK ಎಕ್ಸಲೆನ್ಸ್ & ಆನರ್ ಪ್ರಶಸ್ತಿ ಪ್ರದಾನ!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಶ್ರೀ ವಿಜಯಕುಮಾರ್ ಆರ್. ಅವರಿಗೆ ಎಂಜಿನಿಯರಿಂಗ್ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ರಾಜ್ಯಮಟ್ಟದ ‘ವಿ.ಕೆ ಎಕ್ಸಲೆನ್ಸ್ ಅಂಡ್ ಆನರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ಹಾಗೂ ವಿಜಯ ಕರ್ನಾಟಕ ಸಂಸ್ಥೆಯ ವತಿಯಿಂದ ನೀಡಲಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ವಿಜಯಕುಮಾರ್ ಆರ್. ಅವರು ಭಾಜನರಾಗಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೆಮ್ಮೆಯ ಸಂಗತಿಯಾಗಿದೆ.
ಅವಳಿ ನಗರದ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯಗಳ ಸುಧಾರಣೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯನಿಷ್ಠೆ ಹಾಗೂ ಅಭಿವೃದ್ಧಿ ಪರವಾದ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಗೌರವ ದೊರೆತಿರುವುದು ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಸಂತಸ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿ ವರ್ಗದ ಪರವಾಗಿ ಉಪ ಆಯುಕ್ತ ವಿಜಯಕುಮಾರ್ ಆರ್. ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಅವಳಿ ನಗರದ ಅಭಿವೃದ್ಧಿಗಾಗಿ ಅವರು ಕೈಗೊಳ್ಳುವ ಸೇವಾ ಕಾರ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಿ ಸಾಕಾರಗೊಳ್ಳಲಿ ಎಂದು ಪಾಲಿಕೆ ವತಿಯಿಂದ ಶುಭ ಹಾರೈಸಲಾಗಿದೆ.
yallu