ಸ್ವಚ್ಛತಾ ಹಿ ಸೇವಾ’ ಅಭಿಯಾನ: ಸಿದ್ಧಾರೂಢ ಮಠ, ಮುರುಗಮಠದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ
ಸ್ವಚ್ಛತಾ ಹಿ ಸೇವಾ’ ಅಭಿಯಾನ: ಸಿದ್ಧಾರೂಢ ಮಠ, ಮುರುಗಮಠದ ಆವರಣದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ
ಹುಬ್ಬಳ್ಳಿ: ‘ಸ್ವಚ್ಛತಾ ಹಿ ಸೇವಾ’ ಅಭಿಯಾನ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಸೆ.28ರಂದು ಬೆಳಗ್ಗೆ 7 ಗಂಟೆಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆವರಣ ಹಾಗೂ ಧಾರವಾಡದ ಶ್ರೀ ಮುರುಗಮಠದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮೂಲಕ ಸ್ವಚ್ಛತೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ನಿರಂತರ ಜೀವನಶೈಲಿಯಾಗಬೇಕು ಎಂಬ ಸಂದೇಶ ಸಾರಲಾಯಿತು. ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಮೂಲಕ ಸ್ವಚ್ಛ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.
ಶ್ರಮದಾನದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಸ್ವಚ್ಛತೆಯ ಬಗ್ಗೆ ಮೂಡಿರುವ ಪ್ರೇರಣೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವಂತೆ ಸಂದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ, ಉಪ ಆಯುಕ್ತರು (ಆಡಳಿತ) ಅನುರಾಧ ವಸ್ತ್ರದ, ಉಪ ಆಯುಕ್ತರು (ಅಭಿವೃದ್ಧಿ) ವಿಜಯಕುಮಾರ್ ಆರ್., ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ್ ಯರಂಗಳ್ಳಿ, ವಲಯ ಆಯುಕ್ತ ಮಲ್ಲಿಕಾರ್ಜುನ ಸಬರದ್, ಎಚ್.ವೈ. ಅಸಂಗಿ, ಆನಂದ್ ಕೇಸರಕೊಪ್ಪ, ಚಂದ್ರಶೇಖರ್ ಪಾಟೀಲ್, ಅರವಿಂದ್ ಜಮಖಂಡಿ, ಪರಿಸರ ಅಭಿಯಂತರರಾದ ನಯನಾ ಕೆ.ಎಸ್., ಸರೋಜ ಪೂಜಾರ್, ಶ್ರೀಧರ್ ಟಿ.ಎನ್., ಅವಿನಾಶ್ ಎಂ. ಸೇರಿದಂತೆ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
yallu