ಥಲಸ್ಸೆಮಿಯಾ ಹಾಗೂ ಹಿಮೋಫೀಲಿಯಾ ಮಕ್ಕಳಿಗಾಗಿ ರಕ್ತದಾನ ಶಿಬಿರ ಆಯೋಜನೆ
ಹುಬ್ಬಳ್ಳಿ: ಥಲಸ್ಸೆಮಿಯಾ ಹಾಗೂ ಹಿಮೋಫೀಲಿಯಾ ಮಕ್ಕಳಿಗಾಗಿ ಸೆ.15ರಂದು ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಥಲಸ್ಸೆಮಿಯಾ ಕಾಯಿಲೆಯಿಂದ ಸುಮಾರು ಒಂಬತ್ತು ವರ್ಷಗಳಿಂದ ಬಳಲುತ್ತಿರುವ ಕುಮಾರಿ ಸೃಷ್ಟಿ ಸಣ್ಣಗೌಡರ ಅವರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆಎಂಸಿಆರ್ಐ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ರಕ್ತನಿಧಿ ವೈದ್ಯಾಧಿಕಾರಿ ಡಾ. ಕವಿತಾ, ವೈದ್ಯಾಧಿಕಾರಿ ಡಾ. ಅನಿಲಕುಮಾರ, ಶ್ರಮಜೀವಿ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಿದಾನಂದ ಸವದತ್ತಿ, ಜನಕಲ್ಯಾಣ ಶಿಕ್ಷಣ ಆರೋಗ್ಯ ಸೇವಾ ಸಂಸ್ಥೆಯ ಆನಂದ ಬಡಿಗೇರ ಹಾಗೂ ಹರೀಶ್ ಕುಮಾರ್ ಆರ್. ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಈಶ್ವರ ಹಸಬಿ, ಥಲಸ್ಸೆಮಿಯಾ ಹಾಗೂ ಹಿಮೋಫೀಲಿಯಾ ಸೇರಿದಂತೆ ಹಲವು ರೋಗಿಗಳಿಗೆ ನಿರಂತರವಾಗಿ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಡಾ. ಕವಿತಾ ಮಾತನಾಡಿ, ಕೆಎಂಸಿಆರ್ಐ ಆಸ್ಪತ್ರೆಯಲ್ಲಿ 70ಕ್ಕೂ ಅಧಿಕ ಮಕ್ಕಳು ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಪ್ರತಿ ತಿಂಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇಂತಹ ಮಕ್ಕಳಿಗೆ ಅಗತ್ಯವಿರುವ ರಕ್ತದ ವ್ಯವಸ್ಥೆಯನ್ನು ಆಸ್ಪತ್ರೆಯ ವತಿಯಿಂದ ಮಾಡಲಾಗುತ್ತಿದೆ. ರಕ್ತದ ಅವಶ್ಯಕತೆ ಹೆಚ್ಚಿರುವುದರಿಂದ ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದರೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರಕ್ತದಾನಿಗಳಿಗೆ ಆಸ್ಪತ್ರೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶ್ರಮಜೀವಿ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಿದಾನಂದ ಸವದತ್ತಿ ಮಾತನಾಡಿ, ಸಂಘದ ವತಿಯಿಂದ ಈ ಹಿಂದೆ ಹಲವು ಬಾರಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಆಟೋ ಚಾಲಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಮತ್ತಷ್ಟು ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದೆ. ಸಂಘದ ಸದಸ್ಯರಾದ ಶಬ್ಬೀರ್ ಬಾಗೇವಾಡಿ, ಶಾಬುದ್ದಿನ್ ಧಾರವಾಡ ಸೇರಿದಂತೆ ಹಲವು ಆಟೋ ಚಾಲಕರು ರಕ್ತದಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ವಿಶೇಷವಾಗಿ ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಶ್ರೀ ಸಿದ್ದನಗೌಡ ಪಾಟೀಲ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಿಗೆ ಮಾದರಿಯಾದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರಮಜೀವಿ ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಪುಂಡಲಿಕ ಬಡಿಗೇರ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು
yallu