UPI ಮೇಲಿನ 0.4% MDR ಶುಲ್ಕ ಹಿಂಪಡೆಯಬೇಕು: ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ಕೇಂದ್ರ ಸರಕಾರಕ್ಕೆ ಒತ್ತಾಯ

UPI ಮೇಲಿನ 0.4% MDR ಶುಲ್ಕ ಹಿಂಪಡೆಯಬೇಕು: ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ಕೇಂದ್ರ ಸರಕಾರಕ್ಕೆ ಒತ್ತಾಯ

ಹುಬ್ಬಳ್ಳಿ ಧಾರವಾಡ: 2,000ಕ್ಕಿಂತ ಹೆಚ್ಚಿನ ಕೆಲವು UPI ವ್ಯಾಪಾರಿ ವಹಿವಾಟುಗಳಿಗೆ 0.4% Merchant Discount Rate (MDR) ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, UPIಯನ್ನು ದೇಶದ ಸಾಮಾನ್ಯ ಜನರ ದೈನಂದಿನ ಬದುಕಿನ ಭಾಗವನ್ನಾಗಿ ಮಾಡಿದ ಬಳಿಕ ಅದರ ಮೇಲಿನ ಹೆಚ್ಚುವರಿ ವಹಿವಾಟು ವೆಚ್ಚದ ವ್ಯವಸ್ಥೆ ಜಾರಿಗೆ ತರುವುದು ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಪರೋಕ್ಷ ಹೊರೆ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

“ಸರ್ಕಾರವು ವರ್ಷಗಳಿಂದ UPIಯನ್ನು ಸರಳ, ವೇಗದ ಮತ್ತು ಶುಲ್ಕರಹಿತ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಜನರಿಗೆ ಪರಿಚಯಿಸಿದೆ. ಸಣ್ಣ ಅಂಗಡಿಯಿಂದ ದೊಡ್ಡ ವ್ಯಾಪಾರಸ್ಥರವರೆಗೆ ಇಂದು ಕೋಟ್ಯಂತರ ಜನರು UPI ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ MDR ಶುಲ್ಕದ ವ್ಯವಸ್ಥೆ ಜಾರಿಗೆ ತರುವುದು ಸರಿಯಲ್ಲ” ಎಂದು ಗೌರಮ್ಮಾ ಬಲೋಗಿ ಹೇಳಿದರು.


2,000ರವರೆಗಿನ ವ್ಯಾಪಾರಿ ಪಾವತಿಗಳು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ UPI ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಸರ್ಕಾರ ತಿಳಿಸಿದ್ದರೂ, 2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ವಹಿವಾಟುಗಳಿಗೆ 0.4% MDR ವಿಧಿಸುವುದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

“MDR ವ್ಯಾಪಾರಿಯ ಮೇಲೆ ವಿಧಿಸಲಾಗುತ್ತದೆ ಎಂದು ಹೇಳಿದರೂ, ವ್ಯಾಪಾರಿಗಳ ವೆಚ್ಚ ಹೆಚ್ಚಾದರೆ ಅದರ ಪರಿಣಾಮ ವಸ್ತು ಮತ್ತು ಸೇವೆಗಳ ಬೆಲೆಗಳ ಮೇಲೆ ಬೀಳುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂತಿಮವಾಗಿ ಅದರ ಹೊರೆ ಗ್ರಾಹಕರ ಮೇಲೆಯೇ ಬೀಳುವ ಅಪಾಯವಿದೆ”
ಡಿಜಿಟಲ್ ಪಾವತಿಗಳಿಂದ ವಹಿವಾಟುಗಳು ಹೆಚ್ಚು ಪಾರದರ್ಶಕವಾಗಿದ್ದು, ವ್ಯಾಪಾರಿಗಳ ಹಣಕಾಸಿನ ದಾಖಲೆಗಳು ವ್ಯವಸ್ಥಿತವಾಗುತ್ತಿವೆ. ಹೀಗಾಗಿ ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರವು ನಿರ್ವಹಣಾ ವೆಚ್ಚವನ್ನು ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಹೊರೆ ಆಗದ ರೀತಿಯಲ್ಲಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

“ನಾವು ಡಿಜಿಟಲ್ ಭಾರತಕ್ಕೆ ವಿರೋಧಿಗಳಲ್ಲ. ಶುಲ್ಕರಹಿತ, ಸುಲಭ ಮತ್ತು ಜನಸ್ನೇಹಿ ಡಿಜಿಟಲ್ ಭಾರತವನ್ನು ನಾವು ಬಯಸುತ್ತೇವೆ. UPIಯನ್ನು ಯಶಸ್ವಿಗೊಳಿಸಿದ್ದು ದೇಶದ ಸಾಮಾನ್ಯ ಜನರು ಮತ್ತು ಸಣ್ಣ ವ್ಯಾಪಾರಿಗಳು. ಅವರ ಮೇಲೆಯೇ ಹೊಸಹೊಸ ಶುಲ್ಕಗಳ ಹೊರೆ ಹಾಕಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.