ಜೈನ್ ಸೀನಿಯರ್ ಕ್ರಿಕೆಟ್ ಲೀಗ್–3ಕ್ಕೆ ಅದ್ಧೂರಿ ಚಾಲನೆ ಗಣ್ಯರಿಂದ ಅಭಿನಂದನೆ
ಹುಬ್ಬಳ್ಳಿ: ಜೈನ್ ಸಮುದಾಯದ ಹಿರಿಯ ಕ್ರಿಕೆಟ್ ಆಟಗಾರರ ಕ್ರೀಡಾ ಪ್ರತಿಭೆಗೆ ವೇದಿಕೆ ಕಲ್ಪಿಸುವ
ಜೈನ್ ಸೀನಿಯರ್ ಕ್ರಿಕೆಟ್ ಲೀಗ್–3 (JSCL)ಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಕುಸುಗಲ್ ರಸ್ತೆ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು, ಸಂಘಟಕರು ಹಾಗೂ ಜೆಎಸ್ಸಿಎಲ್ ಆಟಗಾರರು ಉತ್ಸಾಹದಿಂದ ಭಾಗವಹಿಸಿದರು.

ಕೆಎಂಡಿ ಅಧ್ಯಕ್ಷ ಭವರಲಾಲ್ ಸಿ. ಜೈನ್ ಹಾಗೂ ಭಾರತೀಯ ರೈಲ್ವೆಯ ಮುಕೇಶ್ ಕುಮಾರ್ ಜೈನ್ (IRAS) ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪಂದ್ಯಾವಳಿಗೆ ಶುಭ ಹಾರೈಸಿದರು.
ಇನ್ನೂ
ಭವರಲಾಲ್ ಸಿ. ಜೈನ್ ಅವರು ಕಳೆದ ಸುಮಾರು 25 ವರ್ಷಗಳಿಂದ ಜೈನ್ ಸಮಾಜದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸುಮಾರು 30 ವರ್ಷಗಳಿಂದ ಕೇಶ್ವಾಪುರ ಮುಕ್ತಿಧಾಮದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಅವರೊಂದಿಗೆ ಉತ್ತಮ ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಿರುವ ವೀರೇಂದ್ರ ಡಿ. ಛೆಡ್ಡಾ ಅವರನ್ನೂ ಸತ್ಕರಿಸಲಾಯಿತು.
ಇನ್ನು ವಿಶೇಷವೆಂದರೆ, ಈ ಬಾರಿಯ JSCL ಪಂದ್ಯಾವಳಿಯಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರು ಕ್ರಿಕೆಟ್ ಅಂಗಳಕ್ಕಿಳಿಯುತ್ತಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸುವಂತೆ ಹಿರಿಯ ಆಟಗಾರರು ಬ್ಯಾಟ್ ಹಾಗೂ ಬಾಲ್ ಹಿಡಿದು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
ಹರಾಜು ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆ ಮಾಡಿ ಒಟ್ಟು ಐದು ತಂಡಗಳನ್ನು ರಚಿಸಲಾಗಿದೆ. ನರೇಂದ್ರ ಟೈಗರ್ಸ್, ಜಿಕೆ ಸ್ಟಾರ್ಸ್, ಕೊಠಾರಿ ರಾಕ್ಸ್ಟಾರ್ಸ್, ಪವರ್ಲೈಟ್ ಸ್ಟರ್ಲೈಟ್ ಹಾಗೂ ವೇದಮುತ್ತಾ ವಾರಿಯರ್ಸ್ ತಂಡಗಳು ಪರಸ್ಪರ ಸೆಣಸಲಿವೆ.
ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಹಿರಿಯ ಆಟಗಾರರ ಅನುಭವದ ಜತೆಗೆ ಗೆಲುವಿನ ಉತ್ಸಾಹವೂ ಮೈದಾನದಲ್ಲಿ ರೋಚಕತೆ ಮೂಡಿಸಲಿದೆ. ತಮ್ಮ ಉದ್ಯೋಗ, ವ್ಯವಹಾರ ಹಾಗೂ ಸಾಮಾಜಿಕ ಜವಾಬ್ದಾರಿಗಳ ನಡುವೆ ಕ್ರೀಡೆಯ ಮೇಲಿನ ಆಸಕ್ತಿಯನ್ನು ಉಳಿಸಿಕೊಂಡಿರುವ ಆಟಗಾರರು ಈ ಲೀಗ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
JSCL ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿರದೆ, ಜೈನ್ ಸಮುದಾಯದ ಹಿರಿಯರ ನಡುವಿನ ಸ್ನೇಹ, ಆತ್ಮೀಯತೆ, ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಿದೆ. ಯುವ ಪೀಳಿಗೆಗೂ ಕ್ರೀಡೆಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಆಯೋಜಕರು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಲ್ಲಿ ಉತ್ತಮ ಉತ್ಸಾಹ ಕಂಡುಬಂದಿದ್ದು, ಮುಂದಿನ ಪಂದ್ಯಗಳಲ್ಲಿ ಐದು ತಂಡಗಳ ನಡುವೆ ನಡೆಯಲಿರುವ ರೋಚಕ ಹಣಾಹಣಿಗೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
yallu