ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ ಖಾದಿಗೆ ಭರ್ಜರಿ ಬೇಡಿಕೆ: ಸ್ವದೇಶಿ ಖಾದಿಗೆ ತಹಶೀಲ್ದಾರ್ ಗಸ್ತೆ ಪ್ರೋತ್ಸಾಹ

ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ ಖಾದಿಗೆ ಭರ್ಜರಿ ಬೇಡಿಕೆ: ಸ್ವದೇಶಿ ಖಾದಿಗೆ ತಹಶೀಲ್ದಾರ್ ಗಸ್ತೆ ಪ್ರೋತ್ಸಾಹ

ಹುಬ್ಬಳ್ಳಿ: “ಖಾದಿ ಬಟ್ಟೆ ಖರೀದಿಸಿ… ಸ್ವದೇಶಿ ಖಾದಿಗೆ ಪ್ರೋತ್ಸಾಹ ನೀಡಿ” ಎಂಬ ಸಂದೇಶದೊಂದಿಗೆ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಆವರಣದಲ್ಲೇ ಖಾದಿ ಬಟ್ಟೆಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಆರಂಭಗೊಂಡಿರುವ ಖಾದಿ ಮಾರಾಟಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರ ನಡುವೆ ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರು ಖುದ್ದಾಗಿ ಖಾದಿ ಬಟ್ಟೆಗಳನ್ನು ಖರೀದಿಸುವ ಮೂಲಕ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೂ ಖಾದಿ ಖರೀದಿಸಲು ಪ್ರೋತ್ಸಾಹ ನೀಡಿದ್ದಾರೆ.

ವಿಶೇಷವಾಗಿ ಮಹಿಳಾ ಸಿಬ್ಬಂದಿ ಖಾದಿ ಸೀರೆಗಳನ್ನು ಖರೀದಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಖಾದಿ ಬಟ್ಟೆ/ಸೀರೆ ಧರಿಸಿ ಕಚೇರಿಗೆ ಬರುವಂತೆ ತಹಶೀಲ್ದಾರ್ ಸೂಚಿಸಿರುವುದು ಗಮನ ಸೆಳೆದಿದೆ.

ತಹಶೀಲ್ದಾರ್  ಮಹೇಶ್ ಭಗವಂತ ಗಸ್ತೆ  ಅವರ ಈ ಮುತುವರ್ಜಿಯಿಂದಾಗಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಯಲ್ಲೇ ಅತಿ ಹೆಚ್ಚು ಖಾದಿ ಬಟ್ಟೆಗಳ ಮಾರಾಟವಾಗುತ್ತಿದೆ ಎಂದು ಖಾದಿ ಮಾರಾಟ ಮಳಿಗೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಖಾದಿ ಎಂದರೆ ಕೇವಲ ಬಟ್ಟೆಯಲ್ಲ; ಅದು ನಮ್ಮ ಸ್ವದೇಶಿ ಪರಂಪರೆ, ಆತ್ಮನಿರ್ಭರತೆ ಹಾಗೂ ರಾಷ್ಟ್ರಭಕ್ತಿಯ ಪ್ರತೀಕ. ಸರ್ಕಾರಿ ಕಚೇರಿಯಿಂದಲೇ ಖಾದಿಗೆ ಪ್ರೋತ್ಸಾಹ ನೀಡುತ್ತಿರುವ ತಹಶೀಲ್ದಾರ್ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ. ಮುಂದಿನ ಐದು ದಿನಗಳ ಕಾಲ ಖಾದಿ ಬಟ್ಟೆಗಳ ಮೇಲೆ ಶೇ.35ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಖಾದಿ ಬಟ್ಟೆಗಳನ್ನು ಖರೀದಿಸುವ ಮೂಲಕ ಸ್ವದೇಶಿ ಖಾದಿಗೆ ಕೈಜೋಡಿಸಬೇಕಾಗಿದೆ..

ವರದಿ :-ಯಲ್ಲಪ್ಪಗೌಡ ಕುಂದಗೋಳ