ಧಾರವಾಡ ನಿರ್ಮಿತಿ ಕೇಂದ್ರದಲ್ಲಿ ಅಕ್ರಮ ನೇಮಕಾತಿ? ವಿಶೇಷ ಸಿಐಡಿ ತನಿಖೆಗೆ ಸಮತಾ ಸೇನಾ ಆಗ್ರಹ!

ಧಾರವಾಡ ನಿರ್ಮಿತಿ ಕೇಂದ್ರದಲ್ಲಿ ಅಕ್ರಮ ನೇಮಕಾತಿ? ವಿಶೇಷ ಸಿಐಡಿ ತನಿಖೆಗೆ ಸಮತಾ ಸೇನಾ ಆಗ್ರಹ!

 ನಿರ್ಮಿತಿ ಕೇಂದ್ರದಲ್ಲಿ ಅಕ್ರಮ ನೇಮಕಾತಿ ಆರೋಪ; ಸಿಐಡಿ ತನಿಖೆಗೆ ಸಮತಾ ಸೇನಾ ಆಗ್ರಹ!

ಧಾರವಾಡ: ಜಿಲ್ಲಾ ನಿರ್ಮಿತಿ ಕೇಂದ್ರ ಧಾರವಾಡದ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ ಪಾಟೀಲ್ ಅವರ ನೇಮಕಾತಿ ನಿಯಮಬಾಹಿರವಾಗಿದ್ದು, ಅವರ ನೇಮಕಾತಿಯನ್ನು ತಕ್ಷಣ ರದ್ದುಗೊಳಿಸಿ ಸೇವೆಯಿಂದ ವಜಾಗೊಳಿಸಬೇಕು. ಅಲ್ಲದೆ, ಅವರ ಹಾಗೂ ಅವರ ಸಹಚರರಿಂದ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಭ್ರಷ್ಟಾಚಾರದ ಕುರಿತು ವಿಶೇಷ ಸಿಐಡಿ ತನಿಖೆ ನಡೆಸಬೇಕು ಎಂದು ಸಮತಾ ಸೇನಾ ಕರ್ನಾಟಕ ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದ ಅಧ್ಯಕ್ಷೆ ಆರ. ಸ್ನೇಹಲ್ ಅವರಿಗೆ ಮನವಿ ಸಲ್ಲಿಸಿದೆ.


ಸಂಘಟನೆಯ ಆರೋಪದಂತೆ, ಸರ್ಕಾರ ನಿರ್ಮಿತಿ ಕೇಂದ್ರಗಳನ್ನು ಸಾರ್ವಜನಿಕ ಕಾಮಗಾರಿಗಳನ್ನು ಪಾರದರ್ಶಕವಾಗಿ ಹಾಗೂ ಸೇವಾ ಮನೋಭಾವದಿಂದ ನಿರ್ವಹಿಸಲು ಸ್ಥಾಪಿಸಿದ್ದರೂ, ಧಾರವಾಡ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಅದರ ಉದ್ದೇಶಗಳಿಗೆ ವಿರುದ್ಧವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ದೂರಲಾಗಿದೆ.
ಸಮತಾ ಸೇನಾ ಹೇಳುವಂತೆ, 2022ರ ಏಪ್ರಿಲ್ 12ರಂದು ನಡೆದ ನಿರ್ಮಿತಿ ಕೇಂದ್ರದ ಸಾಮಾನ್ಯ ಸಭೆಯಲ್ಲಿ ಯಾವುದೇ ಸಾರ್ವಜನಿಕ ಪ್ರಕಟಣೆ ಅಥವಾ ಅರ್ಜಿ ಆಹ್ವಾನಿಸದೇ ಶಿವಕುಮಾರ ಪಾಟೀಲ್ ಅವರನ್ನು ಪೂರ್ಣಾವಧಿ ಯೋಜನಾ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿ ನಿರ್ಮಿತಿ ಕೇಂದ್ರದ ಬೈಲಾ ಹಾಗೂ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.


ಈ ಕುರಿತು ಬಂದ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಉಪವಿಭಾಗಾಧಿಕಾರಿಗಳು ತನಿಖೆ ನಡೆಸಿದ್ದು, 2023ರ ಜೂನ್ 15ರಂದು ಸಲ್ಲಿಸಿದ ವರದಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಗಂಭೀರ ಲೋಪಗಳು ಕಂಡುಬಂದಿರುವುದಾಗಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಪ್ರಕಟಣೆ ನೀಡದಿರುವುದು, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸದಿರುವುದು ಹಾಗೂ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಅನುಸರಿಸದಿರುವುದು ಸೇರಿದಂತೆ ಹಲವು ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಹೀಗಾಗಿ ಶಿವಕುಮಾರ ಪಾಟೀಲ್ ಅವರ ನೇಮಕಾತಿಯನ್ನು ರದ್ದುಗೊಳಿಸಿ, ಅರ್ಹ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನಿಸಿ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಸಮತಾ ಸೇನಾ ಒತ್ತಾಯಿಸಿದೆ.

ಇದೇ ವೇಳೆ, ನಿರ್ಮಿತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತು ವಿಶೇಷ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ವರದಿ ರಾಜು ಮುದ್ಗಲ್ ಹುಬ್ಬಳ್ಳಿ!