ರಾಯಣ್ಣನ ಜಯಂತೋತ್ಸವಕ್ಕೆ ಕಳೆ; ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಹಾಗೂ ಬೈಕ್ ರ್ಯಾಲಿ

ರಾಯಣ್ಣನ ಜಯಂತೋತ್ಸವಕ್ಕೆ ಕಳೆ; ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಹಾಗೂ ಬೈಕ್ ರ್ಯಾಲಿ

ಹುಬ್ಬಳ್ಳಿ: ಗೋಪನಕೊಪ್ಪದ ಶ್ರೀ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 229ನೇ ಜಯಂತೋತ್ಸವ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ ಮತ್ತು ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಧೈರ್ಯ ಮತ್ತು ಆದರ್ಶಗಳನ್ನು ಸ್ಮರಿಸುವುದರ ಜೊತೆಗೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರ, ರಾಯಣ್ಣನ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು. ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು. ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಇಂತಹ ಸೇವಾ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಪಾಲಿಕೆ ಸದಸ್ಯ ಶ್ರೀ ಪಿಕೆ ರಾಯನಗೌಡ್ರು ವಹಿಸಿದ್ದರು. ಪಾಲಿಕೆ ಸದಸ್ಯ ಎಂ.ವೈ. ನರಗುಂದ ಸೇರಿದಂತೆ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ ರಾಯನಗೌಡ, ಶ್ರೀ ಬೀರಪ್ಪ ಕಂಡೇಕರ್, ಹೂವಪ್ಪ ದಾಯಗೋಡಿ, ನಿಂಗಪ್ಪ ಜಕ್ಕಲಿ, ಶ್ರೀಧರ್ ನರಗುಂದ, ವಸಂತ್ ಜೆಟ್ಟನವರ್, ಮಾರುತಿ ಜೆಟ್ಟಪ್ಪನವರ್ ಸೇರಿದಂತೆ ಹಲವಾರು ಗಣ್ಯರು, ದೇಶಪ್ರೇಮಿಗಳು, ಯುವಕ ಮಿತ್ರರು ಹಾಗೂ ಹಿರಿಯರು ಉಪಸ್ಥಿತರಿದ್ದರು.


ಬೃಹತ್ ಬೈಕ್ ರ‍್ಯಾಲಿಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇಶಭಕ್ತಿ ಹಾಗೂ ರಾಯಣ್ಣನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವು ದೇಶಪ್ರೇಮದ ವಾತಾವರಣದಲ್ಲಿ ಸಂಭ್ರಮದಿಂದ ನೆರವೇರಿತು.